ಬೆಳಗಾವಿ : ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪೂರ, ಅಥಣಿ, ಸವದತ್ತಿ ಈ ತಾಲೂಕು ಕೇಂದ್ರಗಳಲ್ಲಿ ನೂತನ ತಾಯಿ ಮಗುವಿನ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಇಂದು ನೂರು ಹಾಸಿಗೆಯುಳ್ಳ ತಾಯಿ ಮಗುವಿನ ನೂತನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ಕಿತ್ತೂರು ಮತ್ತು ಅಥಣಿ ತಾಲೂಕುಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗೆಯನ್ನು ಗುರುತಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಬೈಲಹೊಂಗಲದ ನೂತನ ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ, ಅಗತ್ಯ ಸಲಕರಣೆ ಮತ್ತು ಇನ್ನಿತರ ಎಲ್ಲ ಸೌಕರ್ಯಗಳನ್ನು ಶೀಘ್ರದಲ್ಲಿ ಒದಗಿಸಲಾಗುವುದು. ಬೈಲಹೊಂಗಲ ತಾಲೂಕಾ ಆಸ್ಪತ್ರೆ ತೀರ ಹಳೆಯದಾಗಿದ್ದು, ಇದರ ಸೂಕ್ತ ರಿಪೇರಿಗಾಗಿ 4 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ವೈದ್ಯರು ಮತ್ತು ಇತರ ಸಿಬ್ಬಂದಿಯ ಸೇವೆಯನ್ನು ಒಂದು ವರ್ಷದ ಬದಲಾಗಿ ಎರಡು ವರ್ಷಗಳವರೆಗೆ ಮುಂದುವರೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.