Sambhal (Uttar Pradesh) News :
ಉತ್ತರ ಪ್ರದೇಶದ sambhal ನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಹಲವು ವರ್ಷಗಳ ನಂತರ ಮತ್ತೊಂದು ದೇಗುಲದ ಬಾಗಿಲು ತೆರೆಯಲಾಗಿದೆ. ಈ ಪ್ರದೇಶದಲ್ಲಿ ದೇಗುಲವಿರುವ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ನಂತರ ಪೊಲೀಸರ ಸಮ್ಮುಖದಲ್ಲಿ ಪುರಾತತ್ವ ಇಲಾಖೆ (ಎಎಸ್ಐ) ಅಧಿಕಾರಿಗಳು ದೇಗುಲವನ್ನು ತೆರೆದಿದ್ದು, ಶುಚಿತ್ವ ಕೆಲಸ ಆರಂಭಿಸಲಾಗಿದೆ.
ಸಂಭಾಲ್‌ನಲ್ಲಿ ಒತ್ತುವರಿ ತೆರವುಗೊಳಿಸುತ್ತಿರುವ ಪೊಲೀಸರು ದಶಕಗಳಿಗೂ ಹೆಚ್ಚು ಕಾಲದಿಂದ ಬಂದ್ ಆಗಿದ್ದ ಮತ್ತೊಂದು ದೇಗುಲವನ್ನು ಪತ್ತೆ ಮಾಡಿದ್ದಾರೆ.
ಎಂದಿನಂತೆ ಪೂಜೆ, ಪುನಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.ಸಂಭಾಲ್ ಸಿಒ ಅನುಜ್ ಕುಮಾರ್ ಚೌಧರಿ ಪ್ರತಿಕ್ರಿಯಿಸಿ, “ಸ್ಥಳೀಯರು ಇಲ್ಲಿ ದೇಗುಲದ ಭೂಮಿ ಒತ್ತುವರಿ ಮಾಡಿಕೊಂಡಿರುವ ಕುರಿತು ನಮಗೆ ಮಾಹಿತಿ ಲಭ್ಯವಾಗಿದೆ. ನಾವು ಸ್ಥಳವನ್ನು ಪರಿಶೀಲಿಸಿದಾಗ ದೇಗುಲ ಪತ್ತೆಯಾಯಿತು” ಎಂದು ತಿಳಿಸಿದರು.
ಸ್ಥಳೀಯ ನಿವಾಸಿ ರಿಶಿಪಾಲ್ ಸಿಂಗ್ ಮಾತನಾಡಿ, “1982ರಲ್ಲಿ ರಾಧಾ ಕೃಷ್ಣ ದೇಗುಲ ನಿರ್ಮಾಣಕ್ಕೆ ಸ್ಥಳೀಯರು ಭೂಮಿ ನೀಡಿದ್ದರು. 1992ರಲ್ಲಿ ಉತ್ತರ ಪ್ರದೇಶದಲ್ಲಿ ಗಲಭೆಗಳು ಸಂಭವಿಸಿದ ಬಳಿಕ ಪೂಜೆ ನಿಂತಿತ್ತು. ಸರಣಿ ಹಿಂಸಾಚಾರ ಮತ್ತು ಕೊಲೆಗಳು ಹಿಂದೂ ಸಮುದಾಯದ ಜನರಲ್ಲಿ ಭೀತಿ ಮೂಡಿಸಿದ ಹಿನ್ನೆಲೆಯಲ್ಲಿ ಅವರು ಇಲ್ಲಿಂದ ಸ್ಥಳಾಂತರಗೊಂಡರು.
ಇಲ್ಲಿ ಸುರಕ್ಷತೆಯ ಭಯದಿಂದ ಹಿಂದೂಗಳು ಕೇವಲ ಹಬ್ಬದ ಸಮಯದಲ್ಲಿ ಮಾತ್ರ ದೇಗುಲಕ್ಕೆ ಆಗಮಿಸುತ್ತಿದ್ದರು. ಕಳೆದ 10 ವರ್ಷದಿಂದ ದೇಗುಲ ಸಂಪೂರ್ಣ ಬಂದ್ ಆಗಿದೆ. ಇಲ್ಲಿ 1978ರಿಂದ ಕೋಮು ಗಲಭೆ ಸೇರಿದಂತೆ ಅನೇಕ ಹಿಂಸಾತ್ಮಕ ಘರ್ಷಣೆ ನಡೆದಿದೆ” ಎಂದರು.
ಇತ್ತೀಚಿಗೆ 46 ವರ್ಷಗಳಿಂದ ಮುಚ್ಚಿದ್ದ ಶಿವನ ದೇಗುಲವನ್ನು ಇಲ್ಲಿ ತೆರೆಯಲಾಗಿತ್ತು. 1978ರಲ್ಲಿ ನಡೆದ ಗಲಭೆ ಬಳಿಕ ಇದನ್ನು ಮುಚ್ಚಲಾಗಿತ್ತು. ಅಂದಿನಿಂದ ಇಲ್ಲಿ ಪೂಜಾದಿಗಳು ಸ್ಥಗಿತಗೊಂಡಿದ್ದವು. ಡಿ. 14ರಂದು ಬಾಗಿಲು ತೆರೆದು ಶುಚಿಗೊಳಿಸುತ್ತಿದ್ದಾಗ ಅವರದಲ್ಲಿರುವ ಬಾವಿಯಲ್ಲಿ ಮಣ್ಣು ಅಗೆಯುವಾಗ ಮೂರು ದೇವರ ವಿಗ್ರಹಗಳು ಪತ್ತೆಯಾಗಿದ್ದವು.