ಮೈಸೂರು : ಏಕಕಾಲದಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಮುಡಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರ ಬಿ.ಕೆ ಕುಮಾರ್ ಎರಡೂ ಕಡೆಯಿಂದ ವೇತನ ಪಡೆಯುತ್ತಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸೇವೆಯಿಂದ ವಜಾಗೊಳಿಸಿ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಮೈಸೂರು ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಮಲಿನ ನೀರು ಶುದ್ದೀಕರಣ ಘಟಕದಲ್ಲಿ ದ್ವಿತೀಯ ದರ್ಜೆಯ ಸಹಾಯಕ ನೌಕರನಾಗಿ ಕೆಲಸ ಮಾಡುತ್ತಿದ್ದ.
ಇದೇ ವೇಳೆ ಮುಡಾದಲ್ಲಿ ಹೊರಗುತ್ತಿಗೆ ನೌಕರನಾಗಿ ಎರಡೂ ವೇತನ ಪಡೆದು ಕಾನೂನು ಉಲ್ಲಂಘನೆ ಮಾಡಿದ್ದಾನೆ. ತುಂಡು ಕೆಲಸ ಆಧಾರದ ಮೇಲೆ ಪಾಲಿಕೆಯ ಒಳಚರಂಡಿ ವಿಭಾಗದ ಮಲಿನ ನೀರು ಶುದ್ದೀಕರಣ ಘಟಕದಲ್ಲಿ ಕುಮಾರ್ ಕೆಲಸ ಮಾಡುತ್ತಿದ್ದರು.
2004 ರಿಂದ ಮುಡಾ ಕಚೇರಿಯಲ್ಲೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ. ಮೂಲತಃ ಪಾಂಡವಪುರ ತಾಲೂಕು ಬೇವಿನಕುಪ್ಪೆ ಗ್ರಾಮದ ಕುಮಾರ್ ಸದ್ಯ ಮೈಸೂರಿನ ವಿಜಯನಗರದ 2ನೇ ಹಂತದಲ್ಲಿ ವಾಸವಾಗಿದ್ದಾನೆ.
ಈ ಹಿಂದೆ ಕಮಿಷನರ್ ಆಗಿದ್ದ ಪಿ.ಎಸ್. ಕಾಂತರಾಜು, ಕಾರ್ಯದರ್ಶಿ ಎಂ.ಕೆ.ಸವಿತಾ ರಕ್ಷಣೆ ಮಾಡಿದ್ದ 8000 ಖಾಲಿ ನಿವೇಶನಗಳ ಪಟ್ಟಿಯಲ್ಲಿದ್ದ ನಿವೇಶನ ಕಂಡ ಕಂಡವರಿಗೆ ಹಂಚಿಕೆ ಮಾಡಲು ಸಹಕರಿಸುತ್ತಿದ್ದ ಎನ್ನುವ ಆರೋಪವೂ ಕೇಳಿ ಬಂದಿದೆ.
ಮುಡಾ ಕಚೇರಿಯ ಎಲ್ಲಾ ವಿಭಾಗದಲ್ಲಿ ಈತನದ್ದೇ ಪಾರುಪತ್ಯ. ಬೇಕಾದ ದಾಖಲೆ ಕ್ಷಣಾರ್ಧದಲ್ಲೇ ಕೈಯ್ಯಲ್ಲಿರಿಸುವ ಚಾಣಾಕ್ಷತನ ಹೊಂದಿದ್ದ. ಸದ್ಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿರುವ ಕಮಿಷನರ್ ಸೂಚಿಸಿದ್ದಾರೆ.
2020 ರಿಂದೀಚೆಗೆ ಮುಡಾ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಗುಮಾಸ್ತನಾಗಿದ್ದ ವೇಳೆ ಇಬ್ಬರು ಕಮಿಷನರ್‌ಗಳಿಗೆ ಶೇ.50:50ರಡಿ ನಿವೇಶನಗಳ ಪಟ್ಟಿ ಒದಗಿಸಿ ಪ್ರಭಾವಿ ಜನಪ್ರತಿನಿಧಿಗಳು, ಮಧ್ಯವರ್ತಿಗಳಿಗೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಕೋಟ್ಯಾಂತರ ಬೆಲೆ ಬಾಳುವ ನಿವೇಶನ ಮಂಜೂರು ಮಾಡಿಸಿ ಕೊಡುತ್ತಿದ್ದನೆಂಬ ಆರೋಪ ಕೇಳಿ ಬಂದಿದೆ.
ಐದು ದಿದ ಹಿಂದೆಯೇ ಬಿ.ಕೆ ಕುಮಾರ್‌ನನ್ನ ವಶಕ್ಕೆ ಪಡೆದಿರುವ ಇ ಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಚಾರಣೆಗೊಳಪಡಿಸಿದ್ದಾರೆ.