Male tailors: ಪುರುಷ ಟೈಲರ್‌ಗಳು ಮಹಿಳೆಯರ ಅಳತೆ ತೆಗೆದುಕೊಳ್ಳುವುದನ್ನು ತಡೆಯುವುದರ ಬಗ್ಗೆಯೂ ಆಯೋಗವನ್ನು ಉತ್ತರ ಪ್ರದೇಶದ ರಾಜ್ಯ ಮಹಿಳಾ ಆಯೋಗವು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಹಿಳಾ ಆಯೋಗದ ಪ್ರಕಾರ ಯಾವುದೇ ಪುರುಷ ಟೈಲರ್, ಉಡುಗೆಯನ್ನು ಹೊಲಿಯಲು ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳುವಂತಿಲ್ಲ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಮ್, ಯೋಗ ಕೇಂದ್ರಗಳಲ್ಲಿ ಮಹಿಳಾ ತರಬೇತುದಾರರು ಇರಬೇಕು ಎಂದು ಆಯೋಗ ತಿಳಿಸಿದೆ.
ಜಿಮ್‌ಗಳು ಮತ್ತು ಯೋಗ ಕೇಂದ್ರಗಳಲ್ಲಿ ಡಿವಿಆರ್ ಸೇರಿದಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಶಾಲಾ ಬಸ್‌ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಅಥವಾ ಮಹಿಳಾ ಶಿಕ್ಷಕರು ಸಹ ಇರಬೇಕೆಂದು ತಿಳಿಸಿದೆ.
ಅಕ್ಟೋಬರ್ 28ರಂದು ಲಖನೌದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಆಯೋಗವು ಈ ಸಲಹೆಗಳನ್ನು ಚರ್ಚಿಸಿದ್ದು, ಮಹಿಳೆಯರ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.
ಈ ಪ್ರಸ್ತಾವನೆಗಳ ಕಾರ್ಯಸಾಧ್ಯತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ.
ಅನುಮೋದನೆಯ ಬಳಿಕ ಈ ಪ್ರಸ್ತಾವನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸಲು ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಗ ಹೇಳಿದೆ.
ಇನ್ನು ಬೂಟಿಕ್ ಸೆಂಟರ್‌ಗಳು ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಿಕೊಳ್ಳಬೇಕು. ಅಲ್ಲದೆ, ಸಕ್ರಿಯ ಸಿಸಿಟಿವಿ ಕಣ್ಗಾವಲನ್ನು ಹೊಂದಿರಬೇಕು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.
ಹೆಚ್ಚುವರಿಯಾಗಿ, ಕೋಚಿಂಗ್ ಸೆಂಟರ್‌ಗಳು ಸಿಸಿಟಿವಿ ಕಣ್ಗಾವಲು ಮತ್ತು ಸರಿಯಾದ ಶೌಚಾಲಯ ಸೌಲಭ್ಯಗಳನ್ನು ಹೊಂದಿರಬೇಕು.
ಮಹಿಳೆಯರಿಗೆ ವಿಶೇಷವಾದ ಬಟ್ಟೆ ಮತ್ತು ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಗ್ರಾಹಕರಿಗೆ ಸಹಾಯ ಮಾಡಲು ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಆಯೋಗ ತಿಳಿಸಿದೆ.