ವಿಜಯಪುರ: 1974ರ ವಕ್ಪ್ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ, ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.
ಬಿಜೆಪಿ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಮಾಡಬೇಕು ಎಂದು ಬಿಜೆಪಿ ಒಳಸಂಚು ಮಾಡಿದೆ. ವಕ್ಫ್ ನೋಟಿಸ್ ಹಿಂಪಡೆಯುವಂತೆ ಸೂಚಿಸಿದ ಮೇಲೂ, ಬಿಜೆಪಿ ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ? ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಹುಟ್ಟು ಗುಣವಾಗಿದೆ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ನೋಟಿಸ್ ಹಿಂಡಪೆಯಲು, ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಲು ಸಿಎಂ ಸಿದ್ದರಾಮಯ್ಯ ಖಡಕ್ ಆದೇಶ ಮಾಡಿದ್ದಾರೆ. ಆದರೆ, ವಕ್ಫ್ ವಿವಾದವನ್ನೇ ಕೈಗೆತ್ತಿಕೊಂಡು ಬೃಹತ್ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ.
ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದ ಪ್ರತಿಭಟನಾ ಜಾಥಾದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೊಲ್ಹಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ.ಕೋಕರೆ, ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಆರ್.ಎಸ್.ಪಾಟೀಲ ಕೂಚಬಾಳ, ಗುರುಲಿಂಗಪ್ಪ ಅಂಗಡಿ, ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ವಿಜಯ ಜೋಶಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.