ಬೆಂಗಳೂರು: ರಾಜ್ಯದಲ್ಲಿ ರೈತರ ಪೋಡಿ ಸಮಸ್ಯೆ ನಿವಾರಣೆಗೆ ಮಹತ್ವದ ಕ್ರಮ ವಹಿಸಲಾಗುತ್ತಿದೆ. ನವೆಂಬರ್.30ರ ನಾಳೆಯಿಂದ ಡಿಜಿಟಲ್ ಪೋಡಿ ಅಭಿಯಾನ ಆರಂಭಗೊಳ್ಳುತ್ತಿದ್ದು, ರೈತರ ಪೋಡಿ ದುರಸ್ಥಿ ಸಮಸ್ಯೆ ಸಂಪೂರ್ಣ ಕ್ಲಿಯರ್ ಆಗಲಿದೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
“ರಾಜ್ಯದಲ್ಲಿ ಒಟ್ಟು 1,96,000 ಸರ್ಕಾರಿ ಸರ್ವೇ ನಂಬರ್ ಇದ್ದು, ನಾನಾ ಸರ್ಕಾರಿ ಯೋಜನೆಗಳ ಅಡಿ ಕಳೆದ 30-40 ವರ್ಷಗಳಿಂದ ಲಕ್ಷಾಂತರ ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ. ಆದರೆ, 30-40 ವರ್ಷ ಆಗಿದ್ದರೂ ಜಮೀನಿಗೆ ಪೋಡಿ ದುರಸ್ಥಿ ಆಗಿಲ್ಲ. ದಾಖಲೆ ಪಕ್ಕ ಆಗಿಲ್ಲ. ಇಂತಹ ಪ್ರಕರಣಗಳೇ ರಾಜ್ಯದಲ್ಲಿ ಕನಿಷ್ಟ 25 ಲಕ್ಷ ಇರಬಹುದು. ಪಕ್ಕ ಪೋಡಿ ದುರಸ್ಥಿ ಮಾಡಲು ನಮೂನೆ 1 ರಿಂದ 5 ಹಾಗೂ 5 ರಿಂದ 10 ದಾಖಲೆ ಲಭ್ಯವಿರಬೇಕು. ಆದರೆ, ಈ ದಾಖಲೆಗಳಿಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾದ್ದಾರೆ. ಸರ್ಕಾರಿ ಕಚೇರಿಗಳಿಗೆ ದಶಕಗಳಿಂದ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಲಭ್ಯವಾಗಿಲ್ಲ” ಎಂದು ವಿಷಾದಿಸಿದರು.
ಸಮಾರಂಭದಲ್ಲಿ 200 ಜನಕ್ಕೆ ಪೋಡಿ ದುರಸ್ಥಿ ಮಾಡಿ ಹೊಸ ಸರ್ವೇ ನಂಬರ್ ನೀಡಲಿದ್ದೇವೆ. ನವೆಂಬರ್.30 ರಿಂದ ಪೋಡಿ ದುರಸ್ಥಿ ಅಭಿಯಾನ ಪೇಪರ್ನಿಂದ ಮಾತ್ರವಲ್ಲ ಫೀಲ್ಡಿನಿಂದಲೂ ಆರಂಭವಾಗಲಿದ್ದು, ಈ ಕೆಲಸ ಸಂಪೂರ್ಣವಾಗಿ ಮುಗಿದರೆ ಕನಿಷ್ಟ 20 ರಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಯಲಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
“ ಕಳೆದ ಒಂದು ವರ್ಷಗಳಿಂದ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿ, ಚರ್ಚಿಸಿ ಕೊನೆಗೂ ನಮೂನೆ 1 ರಿಂದ 5 ಪೋಡಿ ದುರಸ್ಥಿ ಕೆಲಸವನ್ನು ಸರಳೀಕರಣಗೊಳಿಸಿ ಇದೀಗ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಆನ್ಲೈನ್ನಲ್ಲಿ ಡಿಜಿಟಲ್ ಪ್ರಕ್ರಿಯೆಗಾಗಿ ಆಪ್ ರೂಪಿಸಲಾಗಿದೆ. 1,96,000 ಸರ್ಕಾರಿ ಸರ್ವೇ ನಂಬರ್ಗಳನ್ನೂ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿ. ಮೊದಲ ಹಂತದಲ್ಲಿ ಈಗಾಗಲೇ 27,107 ಫೈಲ್ ಸೃಷ್ಟಿಸಲಾಗಿದೆ. ಈ ಸಂಬಂಧ ಡಾಟಾ ಎಂಟ್ರಿ ಕೆಲಸವೂ ನಡೆಯುತ್ತಲೇ ಇದೆ. ಇದರ ಜೊತೆ ಜೊತೆಗೆ ನಮೂನೆ 6 ರಿಂದ 10 ರ ಸರ್ವೇ ಕೆಲಸಕ್ಕೆ ಶನಿವಾರದಿಂದಲೇ (ನವೆಂಬರ್ 30) ಹಾಸನದಿಂದ ವಿದ್ಯುಕ್ತ ಚಾಲನೆ ನೀಡಲಾಗುವುದು.